ಬಸವನಬಾಗೇವಾಡಿ
	ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು; ಹಾಗೂ ತಾಲ್ಲೂಕಿನ ಮುಖ್ಯಸ್ಥಳ. ಅದೇ ಜಿಲ್ಲೆಯ ಬಿಜಾಪುರ, ಸಿಂದಗಿ, ಮುದ್ದೇಬಿಹಾಳ, ಬಾಗಲಕೋಟೆ, ಬೀಳಗಿ ತಾಲ್ಲೂಕಗಳು ಈ ತಾಲ್ಲೂಕನ್ನು ಸುತ್ತುವರಿದಿವೆ. ಕೊಲ್ಹಾರ, ಬಸವನಬಾಗೇವಾಡಿ, ಹೂವಿನಹಿಪ್ಪರಗಿ ಹೋಬಳಿಗಳಿರುವ ಈ ತಾಲ್ಲೂಕಿನ ಒಟ್ಟು ಹಳ್ಳಿಗಳ ಸಂಖ್ಯೆ 120. ತಾಲ್ಲೂಕಿನ ವಿಸ್ತೀರ್ಣ 1978 ಚ. ಕಿಮೀ. ತಾಲ್ಲೂಕಿನ ಜನಸಂಖ್ಯೆ 3,03,214 (2001)

	ತಾಲ್ಲೂಕಿನ ಮುಖ್ಯ ಬೆಳೆಗಳು ಜೋಳ, ಮತ್ತು ಸಜ್ಜೆ. ಇತರ ಬೆಳೆಗಳು ಗೋಧಿ, ಮೆಕ್ಕೆಜೋಳ, ಕಡಲೆ, ತೊಗರಿ, ಎಳ್ಳು, ಹತ್ತಿ. ಸೋಲಾಪುರ-ಗದಗ ರೈಲುಮಾರ್ಗ ಈ ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ. ನಿಡಗುಂದಿ, ವಂದಾಲ, ಕೂಡಗಿ, ತೆಲಗಿ, ಮುಳವಾಡ ಇವೂ ರೈಲುನಿಲ್ದಾಣಗಳು. ತಾಲ್ಲೂಕಿನ ಪ್ರಮುಖ ಸ್ಥಳಗಳು ಆಲಮಟ್ಟಿ, ಚಿಮ್ಮಲಗಿ, ನಿಡಗುಂದಿ, ಹೆಬ್ಬಾಳ, ಮತ್ತು ಇಂಗಳೇಶ್ವರ. ಆಲಮಟ್ಟಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಕಟ್ಟಿ ನಿರ್ಮಾಣವಾಗುತ್ತಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಸಂಗಮಸ್ಥಳವಾದ ಚಿಮ್ಮಲಿಗೆ (ಚಿನ್ಮಯ ಕ್ಷೇತ್ರ) ಒಂದು ಯಾತ್ರಸ್ಥಳ. ನಿಡುಗುಂದಿ ವ್ಯಾಪಾರ ಸ್ಥಳ, ಹೆಬ್ಬಾಳದಲ್ಲಿ ಚಾಳುಕ್ಯ ಶೈಲಿಯ ಒಂದು ದೇವಸ್ಥಾನವಿದೆ. ಇದು ಬಸವನಬಾಗೇವಾಡಿ ಪಟ್ಟಣಕ್ಕೆ ಸುಮಾರು 16 ಕಿಮೀ ದೂರದಲ್ಲಿದೆ. ಬಸವನಬಾಗೇವಾಡಿ 10 ಕಿಮೀ ದೂರದಲ್ಲಿರುವ ಇಂಗಳೇಶ್ವರದಲ್ಲಿರುವ ದೇವಾಲಯಗಳು ಪ್ರಾಚೀನವಾದವು.

	ತಾಲ್ಲೂಕಿನ ಮುಖ್ಯಸ್ಥಳವಾದ ಬಸವನಬಾಗೇವಾಡಿ ಬಿಜಾಪುರದಿಂದ ಆಗ್ನೇಯಕ್ಕೆ ಸುಮಾರು 43 ಕಿಮೀ. ದೂರದಲ್ಲಿ, ತೆಲಗಿ ರೈಲ್ವೆ ನಿಲ್ದಾಣದಿಂದ ಈಶಾನ್ಯಕ್ಕೆ ಸುಮಾರು 19ಕಿಮೀ. ದೂರದಲ್ಲಿದೆ. ಜನಸಂಖ್ಯೆ 28,582 (2001). ಇದು 12ನೆಯ ಶತಮಾನದಲ್ಲಿದ ಬಸವೇಶ್ವರರ ಜನ್ಮಸ್ಥಳ. ಹಿಂದೆ ಇದಕ್ಕೆ ನೀಲಗಿರಿ ಪಟ್ಟಣ ಎಂಬ ಹೆಸರಿತ್ತು ಅನಂತರ ಇದು ಬಾಗೋಡಿ ಎನಿಸಿಕೊಂಡು ಆಮೇಲೆ ಬಾಗೇವಾಡಿ ಆಯಿತು. 1968ರಲ್ಲಿ ಇದನ್ನು ಬಸವನಬಾಗೇವಾಡಿ ಎಂದು ಕರೆಯಲಾಯಿತು. ಇಲ್ಲಿ ಬಸವೇಶ್ವರರ ದೇವಾಲಯವಿದೆ. ಈ ದೇವಾಲಯದಲ್ಲಿ ಗಣಪತಿ, ಸಂಗಮೇಶ್ವರ, ಮಲ್ಲಿಕಾರ್ಜುನ ಹಾಗೂ ಬಸವೇಶ್ವರ ವಿಗ್ರಹಗಳಿವೆ. ದೇವಾಲಯ ದಕ್ಷಿಣಾಭಿಮುಖಿವಾಗಿದೆ.	 ಪ್ರಾಂಗಣದಲ್ಲಿದ್ದ ಹಳೆಯ ಬಾವಿಯನ್ನು ಮುಚ್ಚಲಾಗಿದೆ. ಮಲ್ಲಿಕಾರ್ಜುನ ದೇವರಗುಡಿಗೆ ಗೋಪುರವಿದೆ. ಬಸವನಬಾಗೇವಾಡಿಯಲ್ಲಿರುವ ಇನ್ನೆರಡು ದೇವಾಲಯಗಳು ರಾಮೇಶ್ವರ ಮತ್ತು ವಿಠೋಬ. ರಾಮೇಶ್ವರ ದೇವಾಲಯ ಚಾಳುಕ್ಯ ಮಾದರಿಯದು. ವಿಠೋಬ ದೇವಾಲಯ ಈಚೆಗೆ ನಿರ್ಮಿಸಲಾದ್ದು. ಊರಿನಲ್ಲಿ ಬಸವೇಶ್ವರ ಗುಡಿಯಷ್ಟೇ ಹಳೆಯದೆಂದು ಹೇಳಲಾದ ಬಾವಿಯಿದೆ. ಇದನ್ನು ಬಸವಣ್ಣನ ಬಾವಿ ಎಂದು ಕರೆಯುತ್ತಾರೆ. ಸಾರಂಗಬಾವಿ ಇನ್ನೊಂದು ಬಸವನಬಾಗೇವಾಡಿಯಲ್ಲಿ ಪೌರಸಭೆಯೂ ಒಂದು ಕಿರಿಯ ಕಾಲೇಜೂ ಇವೆ. ಇಲ್ಲಿ ಪ್ರತಿ ಸೋಮವಾರ ಸಂತೆ ಸೇರುತ್ತದೆ.

	ಬಾಗೇವಾಡಿ ಎಂಬ ಹೆಸರಿನ ಗ್ರಾಮ ಬೆಳಗಾಂವಿ ಜಿಲ್ಲೆಯ ಬೆಳಗಾಂವಿ ತಾಲ್ಲೂಕಿನಲ್ಲಿದೆ. ಈ ಗ್ರಾಮ ಬೆಳಗಾಂವಿ ನಗರದ ದಕ್ಷಿಣಕ್ಕೆ 19 ಕಿಮೀ ದೂರದಲ್ಲಿದೆ.
(ಎಸ್.ಎನ್.ಎಆರ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ